ರಾಕೀಪರ್ವತಸ್ತೋಮ	
ಉತ್ತರ ಅಮೆರಿಕದ ಪಶ್ಚಿಮದಲ್ಲಿ ಮೆಕ್ಸಿಕೋದಿಂದ ಅಲಾಸ್ಕದವರೆಗೆ ಹಬ್ಬಿರುವ ಒಂದು ಪರ್ವತ ಶ್ರೇಣಿ.  ಇದು ಸು.  4,800 ಕಿಮೀ ಉದ್ದ 563 ಕಿಮೀ ಅಗಲವಿದೆ. ಈ ಶ್ರೇಣಿ ನ್ಯೂ ಮೆಕ್ಸಿಕೊದಿಂದ ಕೊಲರಾಡೊ, ಯೂಟಾ ವೈಯೋಮಿನ್, ಇಡಾಹೊ, ಮಾಂಟಾನ್ನ, ನೆವಾಡ ಮತ್ತು ವಾಷಿಂಗ್‍ಟನ್ ಮೂಲಕ ಹಾದು ಮುಂದೆ ಕೆನಡದ ಆಲ್ಬರ್ಟ್, ಬ್ರಿಟಿಷ್ ಕೊಲಂಬಿಯಾ ಹಾಗೂ ವಾಯುವ್ಯ ಮತ್ತು ಯೂಕಾನ್ ಪ್ರಾಂತ್ಯಗಳ ಮೂಲಕ ಅಲಾಸ್ಕದಲ್ಲೂ ಹಬ್ಬಿದೆ.  ಹಿಮಾಚ್ಛಾದಿತ ಶಿಖರಗಳಿಂದ ಕೂಡಿರುವ ಈ ಪರ್ವತ ಶ್ರೇಣಿ ಸುಮಾರು ಹತ್ತುಲಕ್ಷವರ್ಷಗಳ ಹಿಂದೆಯೇ ರೂಪುಗೊಂಡಿದ್ದು ಎನ್ನಲಾಗಿದೆ.  ಈ ಪರ್ವತಗಳ ಎರಡೂ ಕಡೆಯ ತಪ್ಪಲುಗಳಲ್ಲಿ ಬಲು ಹಿಂದೆ ಸಮುದ್ರದಲ್ಲಿ ವಾಸಿಸುತ್ತಿದ್ದ ಪ್ರಾಣಿಗಳ ಅಸ್ಥಿಪಂಜರಗಳೂ ಭೂಗರ್ಭದಿಂದ ಉಕ್ಕಿ ಬಂದ ಲಾವಾರಸದಿಂದ ರೂಪುಗೊಂಡ ಶಿಲೆಗಳೂ ಸಿಕ್ಕಿವೆ.  ಪರ್ವತ ಪ್ರದೇಶದಲ್ಲಿ ತಣ್ಣಗಾದ ಜ್ವಾಲಾಮುಖಿಗಳನ್ನೂ ಶಿಲಾಪ್ರವಾಹದ ಸ್ತರಗಳನ್ನೂ ಕಾಣಬಹುದು. ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿರುವ ಬಿಸಿನೀರಿನ ಬುಗ್ಗೆಗಳು ಪ್ರಸಿದ್ಧವಾದವು.  ಭೂಸವೆತದ ಪರಿಣಾಮವಾಗಿ ರಾಕೀ ಪರ್ವತಗಳಲ್ಲಿ ಬೃಹದಾಕೃತಿಯ ಕಡಿದಾದ ಬಂಡೆಗಳಿವೆ.  ಇವು ಚಳಿಗಾಲದಲ್ಲಿ ಹಿಮದಿಂದ ಮುಚ್ಚಿರುತ್ತವೆ.  ವೈಯೋಮಿನ್ ರಾಜ್ಯದ ದಕ್ಷಿಣದಲ್ಲಿರುವ ದಕ್ಷಿಣ ರಾಕೀಪರ್ವತ ಪಂಕ್ತಿ 402 ಕಿಮೀ ಉದ್ದ 160 ಕಿಮೀ ಅಗಲ ಇದೆ.  ಕೊಲರಾಡೋದಲ್ಲಿ ಈ ಪರ್ವತ ಪಂಕ್ತಿಯಲ್ಲಿ ಬರುವ 55 ಕಿ.ಮೀ ಶಿಖರಗಳು ಸುಮಾರು 270 ಮೀಗೂ ಹೆಚ್ಚು ಎತ್ತರವಾಗಿವೆ.  ಯೂಟಾ ಮತ್ತು ನ್ಯೂ ಮೆಕ್ಸಿಕೊ ಪ್ರದೇಶದಲ್ಲಿನ ಪರ್ವತ ಪಂಕ್ತಿಯಲ್ಲಿರುವ ಸುಮಾರು ಹತ್ತು ಶಿಖರಗಳು, 3,960 ಮೀ ಎತ್ತರ ಮುಟ್ಟುತ್ತವೆ.  ಕೆನಡದಲ್ಲಿರುವ ರಾಕೀಪರ್ವತ ಪಂಕ್ತಿಯ ಶಿಖರಗಳು ಕೆಲವು 3,350 ಮೀ. ನಿಂದ 3,660 ಮೀ ಎತ್ತರ ಇವೆ.   ಬ್ರಿಟಿಷ್ ಕೊಲಂಬಿಯದ ಮೌಂಟ್‍ರಾಬ್‍ಸನ್ ಶಿಖರ 3,954 ಮೀ ಇದೆ.  ಮುಂದೆ ಈ ಪರ್ವತಶ್ರೇಣಿ ಅಲಾಸ್ಕದ ಮೂಲಕ ಕ್ರಮೇಣ ಅಗಲ ಕಡಿಮೆಯಾಗಿ ಕಿರಿದಾಗುತ್ತ ಹೋಗಿ ಅನೇಕ ಚಿಕ್ಕ ಬೆಟ್ಟಗಳ ಸಾಲುಗಳಂತೆ ಆಕ್ರ್ಟಿಕ್ ಪ್ರದೇಶದಲ್ಲಿ ಕೊನೆಗಾಣುವುವು.   ಈ ಪರ್ವತಗಳನ್ನು ದಾಟಬಹುದಾದ ಅನೇಕ ಮಾರ್ಗಗಳಿರುವುದರಿಂದ ಆಧುನಿಕ ಸಂಚಾರಕ್ಕೆ, ವಾಣಿಜ್ಯ ವ್ಯಾಪಾರಕ್ಕೆ ಅತಂಕವಿಲ್ಲ.  ಪ್ರಕೃತಿ ಸೌಂದರ್ಯಕ್ಕೂ ವಿಸ್ಮಯಕಾರಕ ದೃಶ್ಯಗಳಿಗೂ ಈ ಪರ್ವತಗಳು ಪ್ರಸಿದ್ಧಿ ಪಡೆದಿವೆ.  ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿಕೊಡುವ ಅನೇಕ ರಾಷ್ಟ್ರೀಯ ಉದ್ಯಾನಗಳು ಈ ಪರ್ವತಗಳ ಮಡಿಲಲ್ಲಿವೆ.  ಅವುಗಳಲ್ಲಿ ಕೊಲರಾಡೋದ ರಾಕೀ ಪರ್ವತ ರಾಷ್ಟ್ರೀಯ ಉದ್ಯಾನ, ವೈಯೋಮಿನ್ ರಾಜ್ಯದ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನ, ಮೌಂಟನಾದ ಗ್ಲೇಷಿಯರ್ ರಾಷ್ಟ್ರೀಯ ಉದ್ಯಾನ ಮತ್ತು ದಕ್ಷಿಣ ಕೆನಡದ ಬಾನ್ ಮತ್ತು ಜಾಸ್ಪರ್ ರಾಷ್ಟ್ರೀಯ ಉದ್ಯಾನಗಳು ಬಲು ಪ್ರಸಿದ್ಧ.

ಇಷ್ಟಲ್ಲದೆ ಈ ರಾಕೀ ಪರ್ವತ ಶ್ರೇಣಿಯಲ್ಲಿ ಅನೇಕ ಬಗೆಯ ಸಸ್ಯಗಳನ್ನೊಳಗೊಂಡ ಅರಣ್ಯ ಪ್ರದೇಶಗಳೂ ಸರೋವರಗಳೂ ಇವೆ.  ಉತ್ತರ ಅಮೆರಿಕದ ವಾಯುಗುಣದ ಮೇಲೂ ಈ ರಾಕೀಪರ್ವತ ಶ್ರೇಣಿಯ ಪ್ರಭಾವವಿದೆ.  ಕೆಲವು ನದಿಗಳ ಉಗಮಸ್ಥಾನವೂ ಆಗಿದೆ.										
(ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ